ಗ್ರಾಮೀಣ ಭಾರತದಲ್ಲಿ ನಮ್ಮ ಕೆಲಸವು, 2023ರಲ್ಲಿ, ಛತ್ತೀಸ್‌ಗಢದ ರಾಯ್‌ಗಢ್ ಜಿಲ್ಲೆಯ ಒಂದು ಬ್ಲಾಕ್‌ನಿಂದ ಆರಂಭವಾಯಿತು.
ಆಗಿನಿಂದ, ನಮ್ಮ ಕ್ಷೇತ್ರ ಸಂಸ್ಥೆಗಳ ಮುಖಾಂತರ ಈ ಕೆಲಸವು ಆರು ರಾಜ್ಯಗಳ (ಛತ್ತೀಸ್‌ಗಢ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡ) 14 ಬ್ಲಾಕ್‌ಗಳಿಗೆ ವಿಸ್ತರಿಸಿದೆ. ಈ ಪ್ರದೇಶಗಳಲ್ಲಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳು ಎಲ್ಲರಿಗೂ ತಲುಪುವಂತೆ ಮಾಡಲು ನಮ್ಮ ತಂಡಗಳು ಶ್ರಮಿಸುತ್ತಿವೆ.
ಒಂದು ಸದೃಢವಾದ ಸಾರ್ವಜನಿಕ ವ್ಯವಸ್ಥೆಯು ಸಮುದಾಯದ ಆರೋಗ್ಯಕ್ಕೆ ಬಹಳ ಮುಖ್ಯ ಎಂದು ನಾವು ನಂಬುತ್ತೇವೆ. ಹಾಗೆಯೇ, ಈ ಸೇವೆಗಳ ಲಭ್ಯತೆ ಅತ್ಯಂತ ಕಡಿಮೆ ಇರುವ ಪ್ರದೇಶಗಳಲ್ಲಿ ಇರುವ ಜನರೂ ಕೂಡ ವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟು ಅದನ್ನು ಬಳಸುವುದು ಕೂಡ ಅಷ್ಟೇ ಮುಖ್ಯ.

ಅಂಗನವಾಡಿ ಕಾರ್ಯಕರ್ತೆಯರು, ಆಶಾ (ASHA) ಕಾರ್ಯಕರ್ತೆಯರು, ಆಕ್ಸಿಲಿಯರಿ ನರ್ಸ್ ಮಿಡ್‌ವೈವ್ಸ್ (ANMs) ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳೊಂದಿಗೆ (CHOs) ನಿಕಟವಾಗಿ ಕೆಲಸ ಮಾಡುವ ಮೂಲಕ, ನಾವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಜನರಿಗೆ ವಿಶ್ವಾಸ ಮೂಡಿಸುವಂತಹ ಗಾಢ ಸಂಬಂಧಗಳನ್ನು ಬೆಳೆಸಲು ಪ್ರಯತ್ನಿಸುತ್ತೇವೆ.
ನಾವೆಲ್ಲರೂ ಒಟ್ಟಾಗಿ, ದೈನಂದಿನ ಆರೋಗ್ಯ ಸೇವೆಗಳನ್ನು ಇನ್ನಷ್ಟು ಉತ್ತಮವಾಗಿ, ಸಮಯಕ್ಕೆ ಸರಿಯಾಗಿ ಮತ್ತು ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲು ಶ್ರಮಿಸುತ್ತಿದ್ದೇವೆ.
ನಮ್ಮ ಕೆಲಸಗಳು ಇವುಗಳನ್ನು ಒಳಗೊಂಡಿವೆ:
- ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ದಿನಗಳ (VHSNDs) ಆಚರಣೆಯನ್ನು ಉತ್ತಮಪಡಿಸುವುದು.
- ಉಪ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಸೇವೆಗಳನ್ನು ಸುಧಾರಿಸುವುದು.
- ರೆಫರಲ್ ವ್ಯವಸ್ಥೆಯು — ಸಾರಿಗೆ ಸೌಲಭ್ಯ ಮತ್ತು ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆಯೂ ಸೇರಿದಂತೆ — ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ಸಿಗುವಂತೆ ಮಾಡುವುದು.
ಸಮುದಾಯಗಳು ತಮ್ಮ ಆರೋಗ್ಯದ ವಿಷಯಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶವಿರಬೇಕು ಎಂದು ನಾವು ನಂಬುತ್ತೇವೆ. ಅದಕ್ಕಾಗಿಯೇ ನಾವು ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕಾಂಶ ಸಮಿತಿಗಳು (VHSNCs) ಹಾಗೂ ಜನ್ ಆರೋಗ್ಯ ಸಮಿತಿಗಳಿಗೆ ನೆರವು ನೀಡುತ್ತೇವೆ ಮತ್ತು ಅವುಗಳನ್ನು ಬಲಪಡಿಸಲು ಪ್ರಯತ್ನಿಸುತ್ತೇವೆ.
ನೇರವಾದ ನೆರವು, ಸಾಮರ್ಥ್ಯ ಅಭಿವೃದ್ಧಿ ಮತ್ತು ದೈನಂದಿನ ಸವಾಲುಗಳನ್ನು ಎದುರಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ, ಅವರು ತಮ್ಮ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ನಾವು ಸಹಾಯ ಮಾಡುತ್ತೇವೆ.
ನಾವು ಗ್ರಾಮೀಣ ಭಾರತದಲ್ಲಿ, ಏಳು ತಿಂಗಳಿಂದ ಮೂರು ವರ್ಷದೊಳಗಿನ ಅತ್ಯಂತ ದುರ್ಬಲ ಮಕ್ಕಳಿಗಾಗಿ ಬಾಲವಾಡಿಗಳನ್ನು ನಡೆಸುತ್ತಿದ್ದೇವೆ. ಇದು ಗ್ರಾಮೀಣ ಭಾರತದಲ್ಲಿ ನಾವು ಮಾಡುತ್ತಿರುವ ಕೆಲಸದ ಒಂದು ಮುಖ್ಯವಾದ ಭಾಗ. ಇವುಗಳಲ್ಲಿ ಹೆಚ್ಚಿನವು ನಾವು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರದೇಶಗಳಲ್ಲಿಯೇ ಇವೆ. ಈ ಬಾಲವಾಡಿಗಳ ಮೂಲಕ, ಮಗುವಿನ ಬೆಳವಣಿಗೆಯ ಅತ್ಯಂತ ನಿರ್ಣಾಯಕ ಹಂತದಲ್ಲಿ ಪೌಷ್ಟಿಕಾಂಶ ಮತ್ತು ಆರೈಕೆಯನ್ನು ಸುಧಾರಿಸಲು ನಾವು ಪ್ರಯತ್ನಿಸುತ್ತೇವೆ.
ಇದರೊಂದಿಗೆ, ನಾವು ಕೆಲಸ ಮಾಡುತ್ತಿರುವ ರಾಜ್ಯಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸುತ್ತಿದ್ದೇವೆ. ಇವು ಅತ್ಯಗತ್ಯ ಸೇವೆಗಳನ್ನು ಒದಗಿಸುವುದಷ್ಟೇ ಅಲ್ಲದೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಬೆಂಬಲ ನೀಡುವ ಉದ್ದೇಶವನ್ನು ಹೊಂದಿವೆ. ರಾಂಚಿಯಲ್ಲಿರುವ ನಮ್ಮ ಹೊಸ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವೈದ್ಯಕೀಯ ಕಾಲೇಜು ಹಾಗೂ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ (ಪೂರಕ ಆರೋಗ್ಯ ಸೇವೆಗಳು) ಕಾರ್ಯಕ್ರಮಗಳು ಇರಲಿವೆ; ಇದು ಆರೋಗ್ಯ ಕ್ಷೇತ್ರದಲ್ಲಿ ಕೌಶಲ್ಯ ಮತ್ತು ಬದ್ಧತೆಯುಳ್ಳ ಕಾರ್ಯಪಡೆಯನ್ನು ರೂಪಿಸಲು ಸಹಾಯ ಮಾಡುತ್ತದೆ.
