ನಗರದ ದುರ್ಬಲ ಸಮುದಾಯಗಳಿಗೆ ಸಮಗ್ರ ಆರೋಗ್ಯ ಸೇವೆಗಳು ಸುಲಭವಾಗಿ ದೊರೆಯುವಂತೆ ಮಾಡುವುದು ನಮ್ಮ ಆದ್ಯತೆಗಳಲ್ಲಿ ಒಂದು.
ಬೆಂಗಳೂರಿನ ಅನೌಪಚಾರಿಕ ವಸಾಹತುಗಳಲ್ಲಿ (Informal settlements) ಹಮ್ಮಿಕೊಂಡಿರುವ ಸಮಗ್ರ ಆರೋಗ್ಯ ಕಾರ್ಯಕ್ರಮದ ಮೂಲಕ ನಾವು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ತಲುಪುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೆಲಸ, ಸ್ಥಳೀಯ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೆಫರಲ್ ನೆರವುಗಳು ಸೇರಿವೆ.

ಈ ವಸಾಹತುಗಳಲ್ಲಿ ವಾಸಿಸುವ ಬಹಳಷ್ಟು ಜನ ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ಇತರ ರಾಜ್ಯಗಳಿಂದ ಬಂದ ವಲಸಿಗರು. ಇವರಲ್ಲಿ ಅನೇಕರು ಅಸಂಘಟಿತ ವಲಯಗಳಲ್ಲಿ — ಅಂದರೆ ಕಟ್ಟಡ ನಿರ್ಮಾಣ, ಇ-ಕಾಮರ್ಸ್ (ಡೆಲಿವರಿ ಬಾಯ್ಸ್ ಇತ್ಯಾದಿ), ಹೌಸ್ ಕೀಪಿಂಗ್, ಸೆಕ್ಯೂರಿಟಿ, ಕಸ ವಿಂಗಡಣೆ ಮತ್ತು ಮನೆಗೆಲಸ — ತೊಡಗಿಸಿಕೊಂಡಿದ್ದಾರೆ. ಇವರು ಕನಿಷ್ಠ ನೈರ್ಮಲ್ಯ ಮತ್ತು ಸ್ವಚ್ಛ ಕುಡಿಯುವ ನೀರಿನ ಸೌಲಭ್ಯಗಳೂ ಇಲ್ಲದಿರುವ ಪ್ರದೇಶಗಳಲ್ಲಿ ವಾಸಿಸುತ್ತಿರುವುದರಿಂದ, ಇವರಿಗೆ ಆರೋಗ್ಯದ ಸಮಸ್ಯೆಗಳು ಎದುರಾಗುವ ಅಪಾಯ ಬಹಳ ಹೆಚ್ಚು.
ಸಾರ್ವಜನಿಕ ಆರೋಗ್ಯ ಸೇವೆಗಳ ಬಗ್ಗೆ ಜನರಲ್ಲಿ ಜಾಗೃತಿ ಕಡಿಮೆ ಇರುವುದು ಒಂದು ಸಾಮಾನ್ಯ ಸಮಸ್ಯೆ. ಈ ವಲಸಿಗರಲ್ಲಿ ಅನೇಕರಿಗೆ ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಗೊತ್ತಿರುವುದಿಲ್ಲ. ಇದರ ಪರಿಣಾಮವಾಗಿ, ಅವರು ಅನಿವಾರ್ಯವಾಗಿ ಅರ್ಹತೆ ಇಲ್ಲದ ವೈದ್ಯರನ್ನು ಅವಲಂಬಿಸಬೇಕಾಗುತ್ತದೆ. ಜೊತೆಗೆ, ಚಿಕಿತ್ಸೆ ಪಡೆಯಲು ವಿಳಂಬ ಮಾಡುವುದರಿಂದ, ಅವರು ತಮ್ಮ ಜೇಬಿನಿಂದಲೇ ಭಾರಿ ಹಣ ಖರ್ಚು ಮಾಡಬೇಕಾಗಿ ಬಂದು ಸಾಲದ ಸುಳಿಗೆ ಸಿಲುಕುತ್ತಾರೆ.
ಆರೋಗ್ಯ ಸೇವೆಯು ಸುಲಭವಾಗಿ, ಸಮಯಕ್ಕೆ ಸರಿಯಾಗಿ ಮತ್ತು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡುವುದರ ಮೂಲಕ ಈ ಚಿತ್ರಣವನ್ನು ಬದಲಾಯಿಸುವುದು ಈ ಸಮುದಾಯಗಳೊಂದಿಗೆ ನಾವು ಮಾಡುತ್ತಿರುವ ಕೆಲಸದ ಮುಖ್ಯ ಉದ್ದೇಶ.
ನಾವು ಬೆಂಗಳೂರಿನ ಐದು ಕ್ಲಸ್ಟರ್‌ಗಳಲ್ಲಿ — ಬೆಳ್ಳಂದೂರು, ಹೆಬ್ಬಾಳ, ಕುಂಬಳಗೋಡು, ಪೀಣ್ಯ ಮತ್ತು ತೂಬರಹಳ್ಳಿ — ಕೆಲಸ ಮಾಡುತ್ತಿದ್ದು, ನಾಲ್ಕು ಆರೋಗ್ಯ ಕೇಂದ್ರಗಳನ್ನು ನಡೆಸುತ್ತಿದ್ದೇವೆ.
ನಮ್ಮ ಕೆಲಸದಲ್ಲಿ ಮುಂಚೂಣಿಯ ಆರೋಗ್ಯ ಕೆಲಸ, ಸಮುದಾಯ ನರ್ಸಿಂಗ್ ಮತ್ತು ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯಗಳು ಒಳಗೊಂಡಿವೆ.
- ಮುಂಚೂಣಿಯ ಆರೋಗ್ಯ ಕೆಲಸವನ್ನು ಕಮ್ಯುನಿಟಿ ಹೆಲ್ತ್ ಅಸೋಸಿಯೇಟ್ಸ್ (CHA) ಮುನ್ನಡೆಸುತ್ತಿದ್ದಾರೆ; ಇವರಲ್ಲಿ ಹೆಚ್ಚಿನವರು ನಾವು ಕೆಲಸ ಮಾಡುವ ಮುದಾಯಗಳಿಗೇ ಸೇರಿದವರಾಗಿದ್ದು, ಪ್ರತಿಯೊಬ್ಬ ಸಿ.ಹೆಚ್.ಎ. ಸುಮಾರು 500 ಮನೆಗಳಿಗೆ ಬೆಂಬಲ ನೀಡುತ್ತಾರೆ. ಅವರು ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಾರೆ, ಆರೋಗ್ಯಕರ ಅಭ್ಯಾಸಗಳನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಮನೆ-ಮನೆಗೆ ಭೇಟಿ ನೀಡಿ ತಪಾಸಣೆಗಳನ್ನು ನಡೆಸುತ್ತಾರೆ. ಇದರಲ್ಲಿ ವಯಸ್ಕರಿಗೆ ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣದ ತಪಾಸಣೆ ಮತ್ತು ಸಣ್ಣ ಮಕ್ಕಳ ಬೆಳವಣಿಗೆಯ ತಪಾಸಣೆಗಳು ಸೇರಿವೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರನ್ನು ನಮ್ಮ ಆರೋಗ್ಯ ಕೇಂದ್ರಗಳಿಗೆ ಅಥವಾ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಇದರೊಂದಿಗೆ, ಲಸಿಕಾಕರಣ ಮತ್ತು ಹೆರಿಗೆ ಮುನ್ನದ ಆರೈಕೆ ಮುಂತಾದ ಸೇವೆಗಳು ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲು ನಾವು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜೊತೆಯೂ ಕೆಲಸ ಮಾಡುತ್ತೇವೆ.
- ಸಮುದಾಯ ನರ್ಸಿಂಗ್ ವಿಭಾಗವನ್ನು ಸಮುದಾಯ ಆರೋಗ್ಯ ನರ್ಸ್‌ಗಳು ಮುನ್ನಡೆಸುತ್ತಾರೆ; ಸಿ.ಹೆಚ್.ಎ.ಗಳಿಗೆ ನೆರವಾಗುವ ಇವರು, ತಲಾ 2,000–2,500 ಮನೆಗಳ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇವರು, ಆರೋಗ್ಯ ತಪಾಸಣೆಗಳು, ನರ್ಸ್‌ಗಳ ನೆರವಿನೊಂದಿಗೆ ನಡೆಯುವ ಟೆಲಿ-ಕನ್ಸಲ್ಟೇಷನ್‌ಗಳು, ಆರೋಗ್ಯ ಶಿಬಿರಗಳು ಮತ್ತು ಸಮುದಾಯದ ಸಭೆಗಳಿಗಾಗಿ ಬಳಸಲ್ಪಡುವ ಸಮುದಾಯ ಸಂಪನ್ಮೂಲ ಕೇಂದ್ರಗಳಿಂದ ಕೆಲಸ ಮಾಡುತ್ತಾರೆ.
- ನಮ್ಮ ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯಗಳು ನಾವು ಸೇವೆ ಸಲ್ಲಿಸುವ ಸಮುದಾಯಗಳಿಗೆ ಹತ್ತಿರದಲ್ಲಿವೆ. ಪ್ರತಿಯೊಂದು ಕೇಂದ್ರದಲ್ಲೂ ಕಾಯುವ ಜಾಗ, ನರ್ಸಿಂಗ್ ವಿಭಾಗ, ವೈದ್ಯರ ಸಮಾಲೋಚನಾ ಕೊಠಡಿಗಳು ಮತ್ತು ಔಷಧಾಲಯ ಇರುತ್ತವೆ. ಈ ಚಿಕಿತ್ಸಾಲಯಗಳು ಮೂಲಭೂತ ರೋಗನಿರ್ಣಯ ತಪಾಸಣೆಗಳು ಮತ್ತು ಗಾಯಗಳಿಗೆ ಶುಶ್ರೂಷೆ ನೀಡುವುದು ಸೇರಿದಂತೆ ಅತ್ಯಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತವೆ.
ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಾಗ, ನಾವು ಅವರನ್ನು ಸರ್ಕಾರಿ ಆಸ್ಪತ್ರೆಗಳಿಗೆ ಸಂಪರ್ಕಿಸುತ್ತೇವೆ. ನಮ್ಮ ತಂಡಗಳು ರೆಫರಲ್ ಬೆಂಬಲವನ್ನು ನೀಡುತ್ತವೆ; ಆಸ್ಪತ್ರೆಯಲ್ಲಿ ಎಲ್ಲಿಗೆ ಹೋಗಬೇಕು ಎಂದು ಮಾರ್ಗದರ್ಶನ ನೀಡಲು ಮತ್ತು ಮುಂದಿನ ಚಿಕಿತ್ಸೆಯ ಫಾಲೋ-ಅಪ್‌ಗಳಿಗಾಗಿ ಪ್ರಮುಖ ಆಸ್ಪತ್ರೆಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ, ನಾವು ನಗರದಾದ್ಯಂತ ಇರುವ ಇತರ ಲಾಭರಹಿತ ಸಂಸ್ಥೆಗಳ ಜೊತೆಯೂ ಕೆಲಸ ಮಾಡುತ್ತೇವೆ.
ನಾವು ಬೆಂಗಳೂರಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಂದಿಗೂ ನಿಕಟವಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ನಮ್ಮ ತಂಡಗಳು ನಿರ್ದಿಷ್ಟ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಲ್ಲಿ ಪ್ರಾಥಮಿಕ ಚಿಕಿತ್ಸೆಯು ಸರಿಯಾಗಿ ಸಿಗುವಂತೆ ಬೆಂಬಲ ನೀಡಲು ಅವರೊಂದಿಗೆ ಕೈಜೋಡಿಸಿವೆ.
ಅರಿವು ಮೂಡಿಸುವುದು, ಲಸಿಕಾಕರಣ, ಮತ್ತು ತಾಯಿ-ಮಗುವಿನ ಆರೋಗ್ಯ ರಕ್ಷಣೆಯೊಂದಿಗೆ ಬೆಂಗಳೂರಿನಲ್ಲಿ ಆರಂಭವಾದ ನಮ್ಮ ಕೆಲಸವು, ಈಗ ಇನ್ನೂ ವ್ಯಾಪಕವಾದ ಅಗತ್ಯತೆಗಳನ್ನು ಪೂರೈಸಲು ವಿಸ್ತರಿಸುತ್ತಿದೆ. ಇದರಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು, ಮಾನಸಿಕ ಆರೋಗ್ಯ, ಉಪಶಮನಕಾರಿ ಆರೈಕೆ (palliative care) ಮತ್ತು ವಿಕಲಚೇತನರಿಗೆ ನೆರವು ನೀಡುವುದು ಸೇರಿವೆ.
ನಾವು ಬೆಂಗಳೂರಿನಲ್ಲಿ ಅಂಗಾಂಗ ಕಸಿಗೆ ವಿಶೇಷ ಒತ್ತು ನೀಡುವಂತಹ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯೊಂದನ್ನು ಸಹ ಸ್ಥಾಪಿಸುತ್ತಿದ್ದೇವೆ.
