ಆರೋಗ್ಯ ಅನುದಾನಗಳು

Health

ಅನುದಾನಗಳು ಆರೋಗ್ಯ ಸೇವೆಗಳಿಂದ ವಂಚಿತರಾದ ಸಮುದಾಯಗಳನ್ನು ತಲುಪುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದು ಜನರನ್ನು ತಲುಪುವ ನಮ್ಮ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದೆ.

ಸ್ಥೂಲವಾಗಿ ನಾವು  ಕೆಳಗಿನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಅನುದಾನಗಳನ್ನು ನೀಡುತ್ತೇವೆ: 

  • ಸಮಗ್ರ ಸಮುದಾಯ ಪ್ರಾಥಮಿಕ ಆರೋಗ್ಯ ರಕ್ಷಣೆ
    ಈ ಕ್ಷೇತ್ರವು ಆರೋಗ್ಯ ಸೇವೆಗಳಿಂದ ವಂಚಿತವಾಗಿರುವ ಪ್ರದೇಶಗಳಲ್ಲಿನ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ದುರ್ಬಲವಾಗಿರುವ ಜನಸಂಖ್ಯೆಯ ಮೇಲೆ ಗಮನ ಹರಿಸುತ್ತದೆ. ಈ ಪ್ರದೇಶಗಳಲ್ಲಿ ದೂರ, ವೆಚ್ಚ ಮತ್ತು ಸಾಮಾಜಿಕ ಅಡೆತಡೆಗಳಿಂದಾಗಿ ಜನರಿಗೆ ಆರೋಗ್ಯ ಸೇವೆಗಳು ಸಿಗುವುದು ಕಷ್ಟವಾಗಿರುತ್ತದೆ. ಅನುದಾನಗಳ ಮೂಲಕ ನಾವು ಆದಿವಾಸಿ, ಗ್ರಾಮೀಣ, ವಲಸಿಗ ಮತ್ತು ಇತರ ನಿರ್ಲಕ್ಷಿತ ಸಮುದಾಯಗಳಿಗೆ ನೆರವು ನೀಡುತ್ತೇವೆ. ಇದರಲ್ಲಿ, ರೋಗ ತಡೆಗಟ್ಟುವಿಕೆ, ಆರೋಗ್ಯ ವರ್ಧನೆ, ಕಾಯಿಲೆ ಗುಣಪಡಿಸುವುದು ಮತ್ತು ಪುನರ್ವಸತಿ ಆರೈಕೆಗಳು, ತಾಯಿ-ಮಗುವಿನ ಆರೋಗ್ಯ, ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆ ಮುಂತಾದ ಸೇವೆಗಳು ಸೇರಿವೆ. ಈ ಕೆಲಸವನ್ನು ಸಾಧ್ಯವಾಗಿಸುವಲ್ಲಿ ನಮ್ಮ ಅನುದಾನಗಳು ಪಾತ್ರ ಮುಖ್ಯವಾದದ್ದು – ಇವು ತಳಸ್ತರದ ಸಮುದಾಯ ಆರೋಗ್ಯ ಕಾರ್ಯಕರ್ತರ ನೇತೃತ್ವದಲ್ಲಿ ನಡೆಯುವ ವ್ಯಾಪಕ ಜನಸಂಪರ್ಕ ಅಭಿಯಾನಗಳು, ಆರೋಗ್ಯ ಶಿಕ್ಷಣ ಮತ್ತು ಮುಂದಿನ ಚಿಕಿತ್ಸೆಯ ಫಾಲೋ-ಅಪ್ ಆರೈಕೆಗಳಿಗೆ ನೆರವು ನೀಡುತ್ತವೆ.
  • ಆಸ್ಪತ್ರೆಯ ಮೂಲಸೌಕರ್ಯ ಮತ್ತು ರೋಗಿಗಳ ಆರೈಕೆ ಉಪಕರಣಗಳನ್ನು ಆಧುನೀಕರಿಸಲು ಬಂಡವಾಳ ವೆಚ್ಚದ ಬೆಂಬಲ
    ಸಾರ್ವಜನಿಕ ಹಿತಾಸಕ್ತಿಯುಳ್ಳ ಮತ್ತು ದಾನಶೀಲ ಆಸ್ಪತ್ರೆಗಳು ಅತ್ಯಗತ್ಯವಾದ, ಹಾಗೂ ಅನೇಕ ಬಾರಿ ಜೀವ ಉಳಿಸುವ ಆರೋಗ್ಯ ಸೇವೆಗಳನ್ನು ಒದಗಿಸುತ್ತವೆ. ವಿಶೇಷವಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಇಲ್ಲದಿರುವ, ಅಸಮರ್ಪಕವಾಗಿರುವ ಅಥವಾ ಅತಿಯಾದ ಜನದಟ್ಟಣೆಯಿಂದ ಕೂಡಿರುವ, ತಲುಪಲು ದುಸ್ತರವಾದ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಇವುಗಳ ಪಾತ್ರ ಬಹಳ ದೊಡ್ಡದು. ವೈದ್ಯಕೀಯ ಸೇವೆಗಳ ನೈತಿಕ ಆಯಾಮವನ್ನು ಎತ್ತಿಹಿಡಿಯುವಲ್ಲಿ ಮತ್ತು ಅಗತ್ಯವಿರುವವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವಲ್ಲಿಯೂ ಇವು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಸೀಮಿತ ಸಂಪನ್ಮೂಲಗಳಿಂದಾಗಿ ಈ ಆಸ್ಪತ್ರೆಗಳಿಗೆ ತಮ್ಮ ದೈನಂದಿನ ಕಾರ್ಯನಿರ್ವಹಣೆಯನ್ನು ಮುಂದುವರಿಸಿಕೊಂಡು ಹೋಗುವುದು ಮತ್ತು ಸೌಲಭ್ಯಗಳನ್ನು ಆಧುನೀಕರಿಸುವುದು ಕಷ್ಟವಾಗುತ್ತದೆ. ಆಸ್ಪತ್ರೆಗಳ ಮೂಲಸೌಕರ್ಯ ಸುಧಾರಣೆ, ವೈದ್ಯಕೀಯ ಉಪಕರಣಗಳ ಖರೀದಿ ಮತ್ತು ನವೀಕರಣಕ್ಕೆ ನೆರವು ನೀಡುವ ಮೂಲಕ ನಮ್ಮ ಅನುದಾನಗಳು ಈ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತವೆ. ಕೆಲವು ಸಂದರ್ಭಗಳಲ್ಲಿ, ನಾವು ಸಮುದಾಯ ಆರೋಗ್ಯ ಕೆಲಸಗಳು, ದೈನಂದಿನ ನಿರ್ವಹಣಾ ವೆಚ್ಚಗಳು ಮತ್ತು ಬಂಡವಾಳ ವೆಚ್ಚಗಳ ಒಟ್ಟಾರೆ ಅಗತ್ಯಗಳಿಗೂ ನೆರವು ನೀಡುತ್ತೇವೆ.
  • ಉಪಶಮನಕಾರಿ ಆರೈಕೆ ಕಾರ್ಯಕ್ರಮಗಳು
    ಈ ಕ್ಷೇತ್ರದಲ್ಲಿ ದೀರ್ಘಕಾಲದ, ಗುಣಪಡಿಸಲಾಗದ ಅಥವಾ ಜೀವಕ್ಕೆ ಕುತ್ತು ತರುವಂತಹ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಮತ್ತು ಅವರ ಕುಟುಂಬಗಳ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಅಗತ್ಯಗಳನ್ನು ಪೂರೈಸುವ ಕೆಲಸ ಮಾಡುಲಾಗುತ್ತದೆ. ಇದು ಕೇವಲ ಜೀವನದ ಕೊನೆಯ ದಿನಗಳಲ್ಲಿರುವವರಿಗೆ ಮಾತ್ರ ಸೀಮಿತವಾಗಿಲ್ಲ. ಸಮುದಾಯ, ಮನೆಯಲ್ಲಿ ಮತ್ತು ಹಾಸ್ಪಿಸ್ ಪರಿಸರಗಳಲ್ಲಿ ಇಂತಹ ನಿರಂತರ ಆರೈಕೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ನಮ್ಮ ಅನುದಾನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮನೆಯಲ್ಲಿ ನೀಡುವ ಉಪಶಮನ ಸೇವೆಯು, ರೋಗಿಗಳು ತಮಗೆ ಪರಿಚಿತವಿರುವ ವಾತಾವರಣದಲ್ಲೇ ಇರಲು ಸಹಾಯ ಮಾಡುತ್ತದೆ. ಇದು ಅವರ ಆತಂಕವನ್ನು ಕಡಿಮೆ ಮಾಡುತ್ತದೆಯಲ್ಲದೆ, ಕುಟುಂಬದ ಮೇಲಿನ ಒತ್ತಡವನ್ನು ತಗ್ಗಿಸುತ್ತದೆ ಮತ್ತು ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುತ್ತದೆ. ಜೊತೆಗೆ, ಇದು ಆರೋಗ್ಯ ವ್ಯವಸ್ಥೆಯ ಮೇಲಿನ ಹೊರೆಯನ್ನು ಸಹ ಕಡಿಮೆ ಮಾಡುತ್ತದೆ. ಇದರೊಂದಿಗೆ, ಹೆಚ್ಚು ಜಟಿಲವಾದ ಅಥವಾ ಜೀವನದ ಕೊನೆಯ ಹಂತದ ಅಗತ್ಯಗಳಿಗಾಗಿ ನಾವು ತಾತ್ಕಾಲಿಕ ಹಸ್ಪಿಸ್ ಆರೈಕೆ ಮತ್ತು ಆಸ್ಪತ್ರೆ-ಆಧಾರಿತ ವೈದ್ಯಕೀಯ ಸೇವೆಗಳಿಗೂ ಬೆಂಬಲ ನೀಡುತ್ತೇವೆ.

ಮಾನಸಿಕ ಆರೋಗ್ಯ ಅನುದಾನಗಳು

ನಮ್ಮ ಮಾನಸಿಕ ಆರೋಗ್ಯ ಅನುದಾನಗಳು ವಯಸ್ಕರು ಮತ್ತು ಹಿರಿಯ ನಾಗರಿಕರಲ್ಲಿ ಕಂಡುಬರುವ ತೀವ್ರ ಮಾನಸಿಕ ಅಸ್ವಸ್ಥತೆ ಮತ್ತು ಸಾಮಾನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳು, ಡಿಮೆನ್ಶಿಯಾ ಮುಂತಾದ ವಿವಿಧ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುವ ಸಂಸ್ಥೆಗಳಿಗೆ ಬೆಂಬಲ ನೀಡುತ್ತವೆ. ಗುಣಮಟ್ಟದ ಮಾನಸಿಕ ಆರೋಗ್ಯ ಆರೈಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗದ ಅಥವಾ ಅದರ ವೆಚ್ಚವನ್ನು ಭರಿಸಲು ಶಕ್ತಿಯಿಲ್ಲದ ವ್ಯಕ್ತಿಗಳನ್ನು ಈ ಅನುದಾನಗಳು ತಲುಪುತ್ತವೆ.

ಈ ಅನುದಾನಗಳು ಸಮಗ್ರವಾದ ನೆರವನ್ನು ಸಾಧ್ಯವಾಗಿಸುತ್ತವೆ — ಇದರಲ್ಲಿ ಜಾಗೃತಿ ಮೂಡಿಸುವುದು, ತಪಾಸಣೆ ಮತ್ತು ಆರಂಭಿಕ ಹಂತದಲ್ಲೇ ಗುರುತಿಸುವುದರಿಂದ ಹಿಡಿದು, ಸಮುದಾಯ ಸ್ವಯಂಸೇವಕರು, ಆರೋಗ್ಯ ಕಾರ್ಯಕರ್ತರು ಮತ್ತು ತಜ್ಞ ವೈದ್ಯರನ್ನು ಒಳಗೊಂಡ ಹಂತ-ಹಂತದ ಆರೈಕೆ ಸೇವೆಗಳ ವಿತರಣೆಯೂ ಸೇರಿದೆ. ನಾವು ರೋಗಿಗಳು ಗುಣಮುಖರಾಗುವತ್ತ ಗಮನಹರಿಸುವ ಆರೈಕೆ, ಪುನರ್ವಸತಿ ಮತ್ತು ಅವರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಕೆಲಸಗಳಿಗೆ ಆದ್ಯತೆ ನೀಡುತ್ತೇವೆ.

ಕೇವಲ ಸೇವೆಗಳನ್ನು ಒದಗಿಸುವುದಷ್ಟೇ ಅಲ್ಲದೆ, ನಮ್ಮ ಅನುದಾನಗಳು ಹೆಚ್ಚು ಸ್ಪಂದಿಸುವ ಮತ್ತು ಸಹಾನುಭೂತಿಯುಳ್ಳ ಮಾನಸಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತವೆ. ನಮ್ಮ ಪಾಲುದಾರ ಸಂಸ್ಥೆಗಳು ರೋಗಿಗಳ ಆರೈಕೆದಾರರು, ಮುಂಚೂಣಿ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ನ್ಯಾಯಾಂಗ ಮತ್ತು ಸರ್ಕಾರಿ ವ್ಯವಸ್ಥೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಕೆಲಸ ಮಾಡುತ್ತವೆ; ಇದರ ಜೊತೆಗೆ ಸಾಮರ್ಥ್ಯ ಅಭಿವೃದ್ಧಿ, ಮೇಲ್ವಿಚಾರಣೆ ಮತ್ತು ಪರಸ್ಪರ ಸಹಯೋಗವನ್ನು ಬಲಪಡಿಸಲು ಶ್ರಮಿಸುತ್ತವೆ.

ಒಟ್ಟಾರೆಯಾಗಿ, ಈ ಪ್ರಯತ್ನಗಳು ಮಾನಸಿಕ ಆರೋಗ್ಯದ ಬಗೆಗಿನ ತಿಳಿವಳಿಕೆಯನ್ನು ಹೆಚ್ಚಿಸುತ್ತವೆ, ಅದರ ಸುತ್ತಲಿನ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುತ್ತವೆ, ನಿರಂತರ ಆರೈಕೆಯನ್ನು ಖಚಿತಪಡಿಸುತ್ತವೆ ಮತ್ತು ವ್ಯಕ್ತಿಗಳು ತಮ್ಮ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತವೆ. ಪರಿಣಾಮವಾಗಿ, ರೋಗಿಗಳ ಘನತೆ, ಮತ್ತು ಜೀವನದ ಮಟ್ಟವನ್ನು ಉತ್ತಮವಾಗಿಸುತ್ತದೆ.

ಇದರ ಜೊತೆಗೆ, ನಮ್ಮ ಸಹವರ್ತಿ ಸಂಸ್ಥೆಗಳು ವಿಶಿಷ್ಟ ವಿಕಲಚೇತನ ಗುರುತಿನ ಚೀಟಿ (UDID ಕಾರ್ಡ್), ವಿಕಲಚೇತನ ಪಿಂಚಣಿಗಳು ಮತ್ತು ಇತರ ಸರ್ಕಾರಿ ಕಲ್ಯಾಣ ಯೋಜನೆಗಳಂತಹ ಅತ್ಯಗತ್ಯ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವು ನೀಡುತ್ತವೆ.

© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
© 2026 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.