ಆರೋಗ್ಯ ಕ್ಷೇತ್ರದಲ್ಲಿರುವ ಪ್ರಮುಖ ಕೊರತೆಗಳನ್ನು ನೀಗಿಸಲು, ನಾವು ಕೈಗೆಟುಕುವ ದರದಲ್ಲಿ ಸೇವೆಗಳನ್ನು ನೀಡುವ ಆಸ್ಪತ್ರೆಗಳ ಜಾಲವನ್ನು ನಿರ್ಮಿಸುತ್ತಿದ್ದೇವೆ.
ಸಮುದಾಯಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ, ಆಸ್ಪತ್ರೆಗಳಲ್ಲಿ ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಸಿಗುವುದು ಅತ್ಯಗತ್ಯ. ದೇಶದ ಅನೇಕ ಭಾಗಗಳಲ್ಲಿ — ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ — ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಅಸಮರ್ಪಕವಾಗಿವೆ; ಇನ್ನೊಂದೆಡೆ ಖಾಸಗಿ ಚಿಕಿತ್ಸೆಯು ಬಡ ಮತ್ತು ದುರ್ಬಲ ಕುಟುಂಬಗಳ ಕೈಗೆಟುಕದಂತಿದೆ. ಇದರ ಪರಿಣಾಮವಾಗಿ, ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ ಜನರು ತಮ್ಮ ಕೈಯಿಂದಲೇ ಮಾಡುವ ಹೆಚ್ಚಿನ ವೈದ್ಯಕೀಯ ವೆಚ್ಚಗಳು ಕುಟುಂಬಗಳನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತವೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ನಾವು ಕೆಲಸ ಮಾಡುತ್ತಿರುವ ರಾಜ್ಯಗಳಾದ್ಯಂತ 30 ಆಸ್ಪತ್ರೆಗಳನ್ನು ಸ್ಥಾಪಿಸುತ್ತಿದ್ದೇವೆ. ಇವುಗಳನ್ನು ಬ್ಲಾಕ್ ಕೇಂದ್ರ ಕಚೇರಿಗಳು, ಜಿಲ್ಲಾ ಕೇಂದ್ರಗಳು ಮತ್ತು ರಾಜ್ಯದ ರಾಜಧಾನಿಗಳಲ್ಲಿ ಸ್ಥಾಪಿಸಲಾಗುವುದು. 100–200 ಹಾಸಿಗೆಗಳಿಂದ ಹಿಡಿದು, 500 ಹಾಸಿಗೆಗಳು ಹಾಗೂ 1,000ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಲಿರುವ ಈ ಆಸ್ಪತ್ರೆಗಳು, ಆಧುನಿಕ ಮೂಲಸೌಕರ್ಯ ಮತ್ತು ಸುಧಾರಿತ ವೈದ್ಯಕೀಯ ಸೇವೆಗಳನ್ನು ಒದಗಿಸಲಿವೆ.
ನಮ್ಮ ಆಸ್ಪತ್ರೆಗಳು:
- ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದ ಜನರಿಗೆ ದ್ವಿತೀಯ ಮತ್ತು ತೃತೀಯ ಹಂತದ ಚಿಕಿತ್ಸೆಗಳನ್ನು ಉಚಿತವಾಗಿ ನೀಡುತ್ತವೆ.
- ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಕಾಲೇಜುಗಳು ಹಾಗೂ ಇತರ ತರಬೇತಿ ಕಾರ್ಯಕ್ರಮಗಳ ಮೂಲಕ ವೈದ್ಯಕೀಯ ಶಿಕ್ಷಣವನ್ನು ವಿಸ್ತರಿಸುವ ಮೂಲಕ ಆರೋಗ್ಯ ಕ್ಷೇತ್ರದ ಕಾರ್ಯಪಡೆಯನ್ನು ಬಲಪಡಿಸುತ್ತವೆ.
- ಒಟ್ಟಾರೆ ಆರೋಗ್ಯ ಪರಿಸ್ಥಿತಿಯನ್ನು ಸುಧಾರಿಸಲು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಾದ, ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳು ಹಾಗೂ ಬ್ಲಾಕ್ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಕೆಲಸ ಮಾಡುತ್ತವೆ.
Where we are building hospitals
ನೆಟ್‌ವರ್ಕ್ ಆಸ್ಪತ್ರೆಗಳು
ಬಡವರಿಗೆ ಮತ್ತು ಆರೋಗ್ಯ ಸೇವೆಗಳಿಂದ ವಂಚಿತರಾದವರಿಗೆ ಹೆಚ್ಚಿನ ಸೌಲಭ್ಯಗಳು ಸಿಗುವಂತೆ ಮಾಡಲು ಹಾಗೂ ಸೇವೆಗಳನ್ನು ಉತ್ತಮಗೊಳಿಸಲು ನಾವು ಹಲವಾರು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಬೆಂಬಲಿಸುತ್ತೇವೆ. ಇದರಿಂದ, ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಬದ್ಧವಾಗಿರುವ, ಸಾರ್ವಜನಿಕ ಹಿತಾಸಕ್ತಿಯುಳ್ಳ ಆಸ್ಪತ್ರೆಗಳ ದೇಶವ್ಯಾಪಿ ಜಾಲವನ್ನು ನಾವು ನಿರ್ಮಿಸುತ್ತಿದ್ದೇವೆ. ಈ ಸಹಭಾಗಿತ್ವದ ಮೂಲಕ, ಹೆಚ್ಚಿನ ಜನರಿಗೆ ಅವರಿಗೆ ಅಗತ್ಯವಿರುವ ಚಿಕಿತ್ಸೆಯು ಸುಲಭವಾಗಿ ಸಿಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ.
ಅಜೀಂ ಪ್ರೇಮ್‌ಜಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು, ರಾಂಚಿ, ಜಾರ್ಖಂಡ್
ನಮ್ಮ ಮೊದಲ ಆಸ್ಪತ್ರೆಯು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಜಾರ್ಖಂಡ್‌ನ ರಾಂಚಿ ಕ್ಯಾಂಪಸ್‌ನ ಭಾಗವಾಗಿ ನಿರ್ಮಾಣವಾಗುತ್ತಿದೆ. ಈ ಸಂಯೋಜಿತ ಕ್ಯಾಂಪಸ್‌ನಲ್ಲಿ ಆಸ್ಪತ್ರೆ, ವಿಶ್ವವಿದ್ಯಾಲಯ, ವೈದ್ಯಕೀಯ, ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಕಾಲೇಜುಗಳು, ವಸತಿ ನಿಲಯಗಳು, ಸಿಬ್ಬಂದಿ ವಸತಿಗೃಹಗಳು ಮತ್ತು ಒಂದು ಶಾಲೆಯೂ ಇರಲಿದೆ. ಈ ಆಸ್ಪತ್ರೆಯನ್ನು ವಿವಿಧ ಹಂತಗಳಲ್ಲಿ 1,500 ಹಾಸಿಗೆಗಳ ಸೂಪರ್-ಸ್ಪೆಷಾಲಿಟಿ ಸೌಲಭ್ಯವಾಗಿ ನಿರ್ಮಿಸಲು ಯೋಜಿಸಲಾಗಿದೆ. ಆಸ್ಪತ್ರೆಯ ಮೊದಲ ಹಂತವು — 230 ಹಾಸಿಗೆಗಳು — 2027ರ ಆರಂಭದಲ್ಲಿ ಸೇವೆಗಳನ್ನು ನೀಡಲು ಪ್ರಾರಂಭಿಸಲಿದೆ.

ನಮ್ಮೊಂದಿಗೆ ಕೈಜೋಡಿಸಿ
ಸಮುದಾಯದ ಆರೋಗ್ಯವನ್ನು ಸುಧಾರಿಸುವ ನಮ್ಮ ಪ್ರಯತ್ನಗಳಲ್ಲಿ ಜೊತೆಯಾಗಲು ನಾವು ಈ ಕೆಳಗಿನ ವೈದ್ಯಕೀಯ ಕ್ಷೇತ್ರದ ವೃತ್ತಿಪರರನ್ನು ಆಹ್ವಾನಿಸುತ್ತೇವೆ:
- ಎಲ್ಲಾ ವಿಭಾಗಗಳ ತಜ್ಞ ವೈದ್ಯರು
- ನರ್ಸ್‌ಗಳು
- ಅಲೈಡ್ ಹೆಲ್ತ್ ವೃತ್ತಿಪರರು
- ಇಂಜಿನಿಯರ್‌ಗಳು
- ಆಸ್ಪತ್ರೆ ನಿರ್ವಹಣೆಯ ಅನುಭವವಿರುವ ಆಡಳಿತಾಧಿಕಾರಿಗಳು
ನಿಮ್ಮ ವೃತ್ತಿಜೀವನಕ್ಕೆ ಒಂದು ಅರ್ಥಪೂರ್ಣ ಮತ್ತು ತೃಪ್ತಿದಾಯಕ ವೇದಿಕೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ.
