ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಸಾಮಾಜಿಕ ಬದಲಾವಣೆಯ ಕುರಿತಾದ ಫೌಂಡೇಷನ್‌ನ ಕಾಣ್ಕೆಯ ಅವಿಭಾಜ್ಯ ಅಂಗವಾಗಿದೆ
ದೇಶದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು, ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿನ ಸಂಸ್ಥೆಗಳ ಮೂಲಕ ಸುಧಾರಿಸಿ ಬದಲಾಯಿಸಬೇಕು ಎಂಬ ಉದ್ದೇಶದಿಂದ ಪ್ರಾರಂಭವಾದ ಏಕಧ್ಯೇಯ ಪ್ರಯತ್ನವು, 2010ರಲ್ಲಿ ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಎಡೆಮಾಡಿಕೊಟ್ಟಿತು.
ಭೋಪಾಲ್ ನಗರದಲ್ಲಿ ನಮ್ಮ ಎರಡನೇ ಕ್ಯಾಂಪಸ್ 2023ರಲ್ಲಿ ಕಾರ್ಯಾರಂಭಗೊಂಡಿತು. ನಾವೀಗ ರಾಂಚಿಯಲ್ಲಿ ನಮ್ಮ ಮೂರನೇ ಕ್ಯಾಂಪಸ್ ಅನ್ನು ಸ್ಥಾಪಿಸುವ ಹಂತದಲ್ಲಿದ್ದೇವೆ.
5,300ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ನಮ್ಮಲ್ಲಿ ಪದವಿಯನ್ನು ಪಡೆದಿದ್ದಾರೆ.
ವಿಶ್ವವಿದ್ಯಾಲಯದ ಬೋಧನೆ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು ಸಮತೆ, ನ್ಯಾಯ, ಮಾನವೀಯತೆ ಮತ್ತು ಸುಸ್ಥಿರತೆಗಾಗಿ ಕೊಡುಗೆಯನ್ನು ನೀಡುವ ದೂರದೃಷ್ಟಿಯನ್ನಿಟ್ಟುಕೊಂಡು ರೂಪಿಸಲಾಗಿದೆ. ನಮ್ಮಲ್ಲಿ ವಿವಿಧ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳು ಮಾತ್ರವಲ್ಲದೆ, ಉದ್ಯೋಗದಲ್ಲಿರುವ ವೃತ್ತಿಪರರಿಗಾಗಿ ಮುಂದುವರಿಕೆ ಶಿಕ್ಷಣ ಕಾರ್ಯಕ್ರಮಗಳೂ ಸಹ ಇವೆ. ಜೊತೆಗೆ, ನಾವು ಅನೇಕ ಪ್ರಕಟಣೆಗಳು ಮತ್ತು ಸಂಪನ್ಮೂಲಗಳನ್ನು ಕೂಡ ಹೊಂದಿದ್ದೇವೆ.
ನಮ್ಮ ಕಾರ್ಯಕ್ರಮಗಳು ಶಿಕ್ಷಣ, ಶಿಕ್ಷಕರ ಶಿಕ್ಷಣ, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ, ಅಭಿವೃದ್ಧಿ, ಸಾರ್ವಜನಿಕ ಆರೋಗ್ಯ, ಜೀವನೋಪಾಯ ಮತ್ತು ಉದ್ಯೋಗ ಸೃಷ್ಟಿ, ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆ, ಸಾಮಾಜಿಕ ಬದಲಾವಣೆಗಾಗಿ ತಂತ್ರಜ್ಞಾನ, ಮತ್ತು ಸಾಮಾಜಿಕ ಕ್ಷೇತ್ರದ ನಾಯಕತ್ವ ಮುಂತಾದ ಸಾಮಾಜಿಕ ಮತ್ತು ಮಾನವ ಅಭಿವೃದ್ಧಿ ಕ್ಷೇತ್ರಗಳಿಗೆ ಸಂಬಂಧಿಸಿವೆ. ಜೊತೆಗೆ, ಅರ್ಥಶಾಸ್ತ್ರ, ಜೀವವಿಜ್ಞಾನ, ಗಣಿತ, ಭೌತವಿಜ್ಞಾನ, ಇತಿಹಾಸ, ಇಂಗ್ಲಿಷ್ ಮತ್ತು ತತ್ತ್ವಶಾಸ್ತ್ರ – ಮುಂತಾದ ಭೌತಿಕ ಮತ್ತು ಸಮಾಜ ವಿಜ್ಞಾನಗಳು, ಮತ್ತು ಮಾನವಿಕ ವಿಷಯಗಳ ಕಾರ್ಯಕ್ರಮಗಳೂ ಇವೆ.
ನಮ್ಮ ವಿದ್ಯಾರ್ಥಿಗಳು ದೇಶದ ಎಲ್ಲ ಭಾಗಗಳಿಂದ ಬಂದಿದ್ದಾರೆ. ಇವರಲ್ಲಿ ಶೇ. 50ಕ್ಕಿಂತಲೂ ಹೆಚ್ಚಿನವರಿಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. 2024ರಲ್ಲಿ ಹೊಸದಾಗಿ ದಾಖಲಾದ ಶೇ. 48ರಷ್ಟು ವಿದ್ಯಾರ್ಥಿಗಳಿಗೆ ಬೋಧನಾ ಮತ್ತು ವಸತಿ ಶುಲ್ಕದಿಂದ ಸಂಪೂರ್ಣ ರಿಯಾಯಿತಿಯನ್ನು ನೀಡಲಾಗಿದೆ.
ನಮ್ಮ ಮುಂದುವರಿಕೆ ಶಿಕ್ಷಣ ಕಾರ್ಯಕ್ರಮಗಳಲ್ಲಿ, ಶಿಕ್ಷಕರು, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ನಾಗರಿಕ ಸಮಾಜದ ಸದಸ್ಯರು – ಹೀಗೆ ವಿವಿಧ ಹಿನ್ನೆಲೆಗಳಿರುವ ಜನರು ಪಾಲ್ಗೊಳ್ಳುತ್ತಿದ್ದಾರೆ.







ವಿದ್ಯಾರ್ಥಿಗಳಿಗೆ ಅತ್ಯುತ್ತಮ ಪಠ್ಯಕ್ರಮ ಮತ್ತು ಆಳವಾದ ಕ್ಷೇತ್ರಾನುಭವವನ್ನು ನೀಡಲು ವಿಶ್ವವಿದ್ಯಾಲಯ, ಕ್ಷೇತ್ರ ಸಂಸ್ಥೆಗಳು ಮತ್ತು ನಮ್ಮ ಕೆಲವು ಸಹವರ್ತಿಗಳು ಸಮನ್ವಯದಿಂದ ಕೆಲಸ ಮಾಡುತ್ತಾರೆ. ಈ ರೀತಿ ಒಟ್ಟಿಗೆ ಕೆಲಸ ಮಾಡುವುದರಿಂದ, ವಾಸ್ತವಕ್ಕೆ ಬಹಳ ಹತ್ತಿರವಿರುವ ಸಂಶೋಧನೆಗಳನ್ನು ಕೈಗೊಂಡು ಜ್ಞಾನಾಭಿವದ್ಧಿ, ನೀತಿ ನಿರೂಪಣೆ ಮತ್ತು ನೀತಿಗಳ ಅನುಷ್ಠಾನ – ಇವೇ ಮುಂತಾದ ಕ್ಷೇತ್ರಗಳಿಗೂ ಕೊಡುಗೆ ನೀಡಲು ಸಾಧ್ಯವಾಗಿದೆ.
